ಕಾಳಿತುಂಬೆ

 ಸಾಲ್ವಿಯ ಎಂಬ ಶಾಸ್ತ್ರೀಯ ಹೆಸರಿನ ಒಂದು ಮೂಲಿಕೆ ಸಸ್ಯಜಾತಿ; ಲೇಬಿಯೇಟೀ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಅನೇಕ ಪ್ರಭೇದಗಳಿವೆ. ಇವುಗಳಲ್ಲಿ ಸಾಲ್ವಿಯ ಈಜಿಪ್ಟಿಯಾಕ, ಸಾಲ್ವಿಯ ಪ್ಲೆಬಿಯ, ಸಾಲ್ವಿಯ ಕಾಕ್ಸೀನಿಯ, ಸಾಲ್ವಿಯ ಮುರ್ಕ್ರಾಫ್ಟಿಯಾನ, ಸಾ. ಲ್ಯಾನೇಟ ಎಂಬುವು ಮುಖ್ಯವಾದುವು ಸಾಲ್ವಿಯ ಅಫಿಸಿನ್ಯಾಲಿಸ್ ಎಂಬ ಇನ್ನೊಂದು ಪ್ರಭೇದವನ್ನು ಸಾಮಾನ್ಯವಾಗಿ ಉದ್ಯಾನಗಳಲ್ಲಿ ಅಲಂಕಾರಸಸ್ಯವಾಗಿ ಬೆಳೆಸುತ್ತಾರೆ. ಇದಕ್ಕೆ ಗಾರ್ಡನ್ ಸೇಜ್ ಎಂಬ ಸಾಮಾನ್ಯ ಬಳಕೆಯ ಹೆಸರಿದೆ. ಕಾಳಿತುಂಬೆ ಗಿಡಗಳು ಉಷ್ಣವಲಯಗಳಲ್ಲೂ ಸಮಶೀತೋಷ್ಣವಲಯಗಳಲ್ಲೂ ಬೆಳೆಯುತ್ತವೆ. ಭಾರತದ ಎಲ್ಲ ಪ್ರದೇಶಗಳಲ್ಲೂ ಇವು ಸಾಮಾನ್ಯ. 1'-11/2' ಎತ್ತರಕ್ಕೆ ಬೆಳೆಯುವ ಪುಟ್ಟಗಾತ್ರದ ಗಿಡಗಳಿವು. ಕಾಂಡ ಚಚ್ಚೌಕವಾಗಿದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ. ಹೂಗೊಂಚಲು ಅಂತ್ಯಾರಂಭಿ ಮಾದರಿಯದು; ಕಾಂಡದ ತುದಿಯಲ್ಲಿ ಉತ್ಪತ್ತಿಯಾಗತ್ತದೆ. ಹೂಗಳು ಕೆಂಪು, ನೀಲಿಕಂದು, ಬಿಳುಪು ಇತ್ಯಾದಿ ವರ್ಣವೈವಿಧ್ಯವನ್ನು ತೋರುತ್ತವೆ. ಹೂಗಳಿಗೆ ಉಪಪತ್ರಗಳಿವೆ (ಬ್ರಾಕ್ಟ್ಸ್); ಹೂ ತೊಟ್ಟು ಇಲ್ಲ. ಉಭಯ ಪಾಶ್ರ್ವಸಮಾಂಗತೆ ಹೂವಿನ ವಿಶಷ್ಟ ಲಕ್ಷಣ. ಸಾಲ್ವಿಯ ಸಸ್ಯದಲ್ಲಿ ಪಾರಾಗಾರ್ಪಣೆಕ್ರಿಯೆಗೆ ಅನುಕೂಲವಾಗುವಂತೆ ಒಂದು ವಿಶಿಷ್ಟ ವ್ಯವಸ್ಥೆ ಇದೆ. ಇದಕ್ಕೆ ಸನ್ನೆ ವಿಧಾನದ ಪರಾಗಾರ್ಪಣೆ ವಿಧಾನ (ಲಿವರ್ ಮೆಕ್ಯಾನಿಸಮ್) ಎಂದು ಹೆಸರು. ಹೂವಿನಲ್ಲಿ ದಳಗಳು ಕೂಡಿಕೊಂಡು ಕೊಳವೆಯಂತಿದ್ದು ತುದಿಯಲ್ಲಿ ಎರಡು ತುಟಿಗಳಂತೆ ಭಾಗವಾಗದೆ. ಮೇಲಿನ ತುಟಿ 2 ದಳಗಳಿಂದ ಕೂಡಿ ಹೆಡೆಯಾಕಾರದಲ್ಲಿದೆ. 3 ದಳಗಳಿಂದ ಕೂಡಿದ ಕೆಳತುಟಿ ಒಂದು ಬಗೆಯ ಪೀಠದಂತಿದ್ದು ಕೀಟಗಳು ಇದರ ಮೇಲೆ ಒಂದು ಕುಳಿತುಕೊಳ್ಳಲು ಅನುಕೂಲವಾಗಿದೆ. ಹೂವಿನಲ್ಲಿರುವ 2 ಕೇಸರಗಳು ಚಿಕ್ಕದಾದ ಕೇಸರದಂಡಗಳಿಂದ ಕೆಳತುಟಿಯ ಬುಡದಲ್ಲಿ ಅಂಟಿಕೊಂಡಿವೆ. ಕೇಸರಗಳ ಸಂಬಂಧಕಗಳು (ಕನೆಕ್ಟಿವ್ಸ್) ಮಾತ್ರ ಬಲು ನೀಳವಾಗಿದ್ದು ಆಟದ ತೂಗುತೊಲೆಯ (ಸೀಸಾ) ಮಾದರಿಯಲ್ಲಿ ಕೇಸರದಂಡಗಳಿಗೆ ಅಂಟಿಕೊಂಡು ತೂಗಾಡುತ್ತವೆ.  ಸಂಬಂಧಕಗಳ  ಮೇಲಿನ ತುದಿಯಲ್ಲಿ ಪರಾಗ ಕೋಶಗಳಿವೆ. ತುದಿಯ ಈ ದಳಸಮೂಹದ ಬುಡದಲ್ಲಿ ಅಂಡಾಶಯದ ಸುತ್ತ ಮಕರಂದ ಗ್ರಂಥಿಗಳಿವೆ. ಮಕರಂದವನ್ನು ಹೀರಿ ಬಂದ ದುಂಬಿ ಪೀಠದ ಮೇಲೆ ಕುಳಿತುಕೊಂಡು ತನ್ನ ಸೊಂಡಿಲನ್ನು ಹೂ ದಳದ ಕೊಳವೆಯಲ್ಲಿ ತೂರಿಸುತ್ತದೆ, ಆಗ ಅವು ಸನ್ನೆಯಂತೆ ವರ್ತಿಸಿ ಕೇಸರಗಳ ಮೇಲ್ತುದಿಗಳು ಹೆಡೆಯಿಂದ ಹೊರಬಂದು ದುಂಬಿಯ ಬೆನ್ನಿನ ಮೇಲೆ ಬಡಿಯುತ್ತವೆ. ಆಗ ಪರಾಗ ಕೋಶಗಳು ಪರಾಗವನ್ನು ದುಂಬಿಯ ಮೇಲೆ ಉದುರಿಸುತ್ತವೆ. ಈ ಗಿಡದಲ್ಲಿ ಕೇಸರಗಳು ಮತ್ತು ಶಲಾಕಾಗ್ರ ಏಕ ಕಾಲದಲ್ಲಿ ಪಕ್ವವಾಗುವುದಿಲ್ಲವಾದ್ದರಿಂದ ಪರಾಗ ದುಂಬಿಯ ಮೇಲೆ ಉದುರಿದಾಗ ಅದೇ ಹೂವಿನ ಶಲಾಕಾಗ್ರ ದುಂಬಿಗೆ ಬಡಿದರೂ ಪರಾಗವನ್ನು ಗ್ರಹಿಸುವುದಿಲ್ಲ. ಅಲ್ಲಿ ಶಲಾಕಾಗ್ರ ಪಕ್ವವಾಗಿದ್ದರೆ ಪರಾಗವನ್ನು ಗ್ರಹಿಸುತ್ತದೆ. ಇದು ಪರಾಗಸ್ಪರ್ಶ ಕ್ರಮ.

ಸಾಲ್ವಿಯ ಗಿಡಗಳನ್ನು ಹೆಚ್ಚಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಕೆಲವು ಪ್ರಭೇದಗಳು ಔಷಧಿ ಗಿಡಗಳಾಗಿ ಉಪಯೋಗವಾಗುತ್ತವೆ. ಸಾಲ್ವಿಯ ಈಜಿಪ್ಟಿಯಾಕ ಗಿಡವನ್ನು ಕಣ್ಣುರೋಗಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಸಾ. ಕಾಬೂಲಿಕ ಗಿಡವನ್ನು ಜ್ವರ, ನೆಗಡಿ ಮತ್ತು ಶ್ವಾಶಕೋಶ ರೋಗಗಳಿಗೆ ಬಳಸುತ್ತಾರೆ. ಸಾಲ್ವಿಯ ಅಫಿಸಿನ್ಯಾಲಿಸ್ ಪ್ರಭೇದದ ಎಲೆಗಳನ್ನು ಮೆಂಡಿಕೆಯ ಉರಿಯೂತದಲ್ಲಿ (ಟಾನ್ಸಿ ಲೈಟಿಸ್) ಮುಕ್ಕಳಿಸುವ ಔಷಧಿಯಾಗಿ ಉಪಯೋಗಿಸುತ್ತಾರೆ. ಸಾ. ಸ್ಪೈನೋಸ ಪ್ರಭೇದದ ಬೀಜಗಳು ಹಲ್ಲು ನೋವನ್ನು ಕಡಿಮೆಮಾಡುತ್ತವೆ.

(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ